ತೌಲನಿಕ ಭಾಷಾವಿಜ್ಞಾನ:- ಭಾಷಾವಿಜ್ಞಾನದ ಪ್ರಮುಖ ವಿಭಾಗಗಳಲ್ಲೊಂದು. ಒಂದು ಭಾಷೆಯ ಸಮಗ್ರ ಚರಿತ್ರೆಯನ್ನು ಕಾಲಕ್ರಮದಂತೆ ವಿವರಿಸುವುದು. ಚಾರಿತ್ರಿಕ ಭಾಷಾವಿಜ್ಞಾನದ (ನೋಡಿ) ಉದ್ದೇಶವಾದರೆ ಎರಡು ಅಥವಾ ಹೆಚ್ಚು ಭಾಷೆಗಳನ್ನು ಹೋಲಿಸಿ ಅವುಗಳ ಅನುವಂಶಿಕ ಸಂಬಂಧಗಳನ್ನು ಅರಿಯುವುದು ತೌಲನಿಕ ಭಾಷಾ ವಿಜ್ಞಾನದ ಉದ್ದೇಶ. ಇದಲ್ಲದೆ ಈ ಶಾಸ್ತ್ರ ಮೂಲಭಾಷೆಯನ್ನು ಗುರುತಿಸಲು ಬೇಕಾದ ಪ್ರಕ್ರಿಯೆ ಮತ್ತು ಸಿದ್ಧಾಂತಗಳನ್ನು ಒಳಗೊಂಡಿದೆ.

ಮಾನವ ಭಾಷೆಯನ್ನು ತಮ್ಮ ಮನಸ್ಸಿನ ಆಂತರಿಕ ಭಾವನೆಗಳನ್ನು ಪ್ರಕಟಿಸಲು ಮತ್ತು ಇನ್ನಿತರ ಸಾಮಾಜಿಕ ವ್ಯವಹಾರಕ್ಕೂ ಅನೇಕ ಕಾಲದಿಂದಲೂ ಬಳಸುತ್ತಿದ್ದಾನಷ್ಟೆ. ಕಾಲ ಭೇದ ಹಾಗೂ ಪ್ರಾಂತಭೇದಗಳಿಂದಾಗಿ ಭಾಷೆಯಲ್ಲೇ ಅನೇಕ ವ್ಯತ್ಯಾಸಗಳಾದುವಲ್ಲದೇ ಅನೇಕ ಭಾಷೆಗಳೂ ಹುಟ್ಟಿಕೊಂಡವು. ಆದ್ದರಿಂದ 18 ಹಾಗೂ 19ನೆಯ ಶತಮಾನಗಳಲ್ಲಿ ಭಾಷೆಗಳ ವರ್ಗೀಕರಣ ಅನಿವಾರ್ಯವಾಯಿತು. ಜಗತ್ತಿನ ಭಾಷೆಗಳಿಗೆಲ್ಲ ಮೂಲವಾದ ಭಾಷೆಯನ್ನು ಅರಿಯುವ ಕುತೂಹಲವೂ ಹೆಚ್ಚಾಗಿ ತೌಲನಿಕ ಸಿದ್ದಾಂತಗಳ ನಿರೂಪಣೆ ಹಾಗೂ ತೌಲನಿಕ ವ್ಯಾಸಂಗಕ್ರಮ ಬೆಳಕಿಗೆ ಬಂದವು. 19ನೆಯ ಶತಮಾನದ ವಿದ್ವಾಂಸರ ದೃಷ್ಟಿ ಈ ದಿಸೆಯಲ್ಲಿ ಹರಿದು ತೌಲನಿಕ ಭಾಷಾವಿಜ್ಞಾನ ಭಾಷಾವಿಜ್ಞಾನದ ಮುಖ್ಯಭಾಗವಾಯಿತಲ್ಲದೆ ಆಧುನಿಕ ಭಾಷಾವಿಜ್ಞಾನದ ಪ್ರಮುಖ ವಿಭಾಗಗಳಾದ ವರ್ಣನಾತ್ಮಕ ಹಾಗೂ ಚಾರಿತ್ರಿಕ ಭಾಷಾ ವಿಜ್ಞಾನಗಳಿಗೆ ಉತ್ತಮ ತಳಹದಿಯೂ ಆಯಿತು. ಈ ಕ್ಷೇತ್ರಕ್ಕೆ ಮುಖ್ಯ ಕೊಡುಗೆ ಬಂದದ್ದು ಜರ್ಮನಿಯಿಂದ ಹಾಗೂ ಜರ್ಮನಿಯಲ್ಲಿ ತರಬೇತಿ ಹೊದಿದ ವಿದ್ವಾಂಸರಿಂದ.

ಈ ಅಧ್ಯಯನ ಕ್ಷೇತ್ರಕ್ಕೆ ಸುಭದ್ರ ತಳಹದಿ ಹಾಕಿದವರಲ್ಲಿ ವಿಲ್‍ಹೆಲ್ಮ್ ಲೈಬ್‍ನಿಟ್ಸ್, ಹರ್ಡರ್ ಹಾಗೂ ಸರ್ ವಿಲಿಯಂ ಜೋನ್ಸ್ ಪ್ರಮುಖರು. ಆದರೆ 1814ರಲ್ಲಿ ರಾಸ್‍ಮಸ್ ರಾಸ್ಕ್ ಯುರೋಪಿನಲ್ಲೆಲ್ಲ ಹಂಚಿಹೋಗಿದ್ದ ಇಂಡೋಯುರೋಪಿಯನ್ ಭಾಷೆಗಳನ್ನು ಒಟ್ಟುಗೂಡಿಸಿ ಅವುಗಳ ಪರಸ್ಪರ ಸಂಬಂಧವನ್ನು ಒತ್ತಿ ಹೇಳಿದ ದಿನದಿಂದಲೇ ತೌಲನಿಕ ಭಾಷಾವಿಜ್ಞಾನ ಪ್ರಾರಂಭವಾಯಿತೆಂದು ಹೇಳಬಹುದು. ಇದಕ್ಕೆ ಹಿಂದೆ ಅಲೆಗ್ಸಾಂಡರ್, ಪಲ್ಲಾಸ್, ಪಾಂಡುರೊ, ಜೋಹನ್ ಆಡೆಲಂಗ್ ಮುಂತಾದವರು ರಚಿಸಿದ ತೌಲನಿಕ ಪದಕೋಶ ಮತ್ತು ವ್ಯಾಕರಣಗಳಿಂದ ಉತ್ತಮ ಹಿನ್ನಲೆ ಏರ್ಪಟ್ಟಿತು. ರಾಸ್ಕನ ಅನಂತರ ಫ್ರಾನ್ಸ್ ಬಾಪ್, ಆಗಸ್ಟ್ ಸ್ಲೈಚರ್, ಷ್ಲೆಗೆಲ್, ಗ್ರಿಮ್, ಕಾರ್ಲ್‍ವರ್ನರ್ ಮೊದಲಾದವರು ಈ ಕ್ಷೇತ್ರದ ಪ್ರಗತಿಗೆ ಬಹುವಾಗಿ ಶ್ರಮಿಸಿದ್ದಾರೆ. 

18ನೆಯ ಶತಮಾನದ ಅಂತ್ಯಭಾಗದ ವೇಳೆಗೆ ಅನೇಕ ಭಾಷೆಗಳು ಪ್ರಚಾರದಲ್ಲಿದ್ದು ಅವುಗಳ ಅನುವಂಶಿಕ ಸಂಬಂಧಗಳನ್ನೂ ಇವೆಲ್ಲಕ್ಕೂ ಮೂಲವಾದ ಆದಿಭಾಷೆಯನ್ನೂ ಅರಿಯುವ ಕುತೂಹಲ ಹೆಚ್ಚಿತು. ಲೈಬ್‍ನಿಟ್ಸ್ ದೇಶೀಯ ಭಾಷೆಗಳ ಅಧ್ಯಯನಕ್ಕೂ ಯುರೇಷ್ಯನ್ ಭಾಷೆಗಳ ವರ್ಗೀಕರಣಕ್ಕೂ ಗಮನಕೊಟ್ಟನಲ್ಲದೆ ಭಾಷೆಗಳೆಲ್ಲವೂ ಒಂದೇ ಮೂಲದಿಂದ ಹುಟ್ಟಿದವೆಂದು ಮೊದಲಬಾರಿಗೆ ಸಾರಿದ. ಹರ್ಡರ್ ಭಾಷೆಯ ಉತ್ಪತ್ತಿಯನ್ನು ಕುರಿತು ಬರೆದ ಲೇಖನವೊಂದರಲ್ಲಿ ಭಾಷೆ ದೈವದತ್ತವೆಂಬ ವಾದವನ್ನು ಬದಿಗೊತ್ತಿ ಮಾನವನ ಆಂತರಿಕ ಭಾವನೆಗಳ ವಿನಿಮಯದ ಅವಶ್ಯಕತೆಯಿಂದಲೇ ಭಾಷೆ ಹುಟ್ಟಿತೆಂಬ ವಾದವನ್ನು ಮುಂದಿಟ್ಟ. ಆದರೆ 19ನೆಯ ಶತಮಾನದ ಭಾಷಾ ವಿಜ್ಞಾನದ ಮೇಲೆ ಅತ್ಯಧಿಕ ಪ್ರಭಾವ ಬೀರಿದ ವ್ಯಕ್ತಿ ಸರ್ ವಿಲಿಯಮ್ಸ್ ಜೋನ್ಸ್. ಸರ್ಕಾರಿ ಕಾರ್ಯದ ನಿಮಿತ್ತ ಭಾರತಕ್ಕೆ ಬಂದ ಜೋನ್ಸ್ ಸಂಸ್ಕøತವನ್ನು ಕಲಿತು ಸಂಸ್ಕøತಕ್ಕೂ ಇನ್ನಿತರ ಯುರೋಪಿಯನ್ ಭಾಷೆಗಳಿಗೂ ಇರುವ ಸಂಬಂಧವನ್ನು ಸ್ಪಷ್ಟಪಡಿಸುವಲ್ಲಿ ಯಶಸ್ವಿಯಾದ. ಫೆಬ್ರವರಿ 1786ರ 3ನೆಯ ತಾರೀಖಿನಂದು ಜೋನ್ಸ್ ಏಷ್ಯಾಟಿಕ್ ಸೊಸೈಟಿಯ ಆಶ್ರಯದಲ್ಲಿ ಮಾಡಿದ ಭಾಷಣದಲ್ಲಿ ಗ್ರೀಕ್, ಲ್ಯಾಟಿನ್ ಗಾತಿಕ್ ಕೆಲ್ಟಿಕ್, ಪರ್ಷಿಯನ್ - ಈ ಎಲ್ಲ ಭಾಷೆಗಳಿಗಿಂತಲೂ ಸಂಸ್ಕøತ ಉತ್ಕ್ರøಷ್ಟವಾಗಿದ್ದು ರಚನೆಯ ದೃಷ್ಟಿಯಿಂದಲೂ ಅದ್ಭುತವಾಗಿದೆ ಎಂದು ತಿಳಿಯ ಪಡಿಸಿದ.

1814ರಲ್ಲಿ ರಾಸ್‍ಮಸ್ ಕ್ರಿಶ್ಚನ್ ರಾಸ್ಕ್ ಎಂಬ ಡೇನಿಷ್ ವಿದ್ವಾಂಸ ಹಳೆನಾರ್ಸ್ ಭಾಷೆ ಗ್ರೀಕ್‍ನಿಂದ ವಿಕಾಸಗೊಂಡಿದೆ ಎಂದು ಹೇಳಿ ಇಂಡೊಯುರೋಪಿಯನ್ ಭಾಷೆಗಳ ಪರಸ್ಪರ ಸಂಬಂಧಗಳನ್ನು ವಿಶದಪಡಿಸಿದ. ಕೇವಲ ಶಬ್ದಕೋಶದ ಆಧಾರದ ಮೇಲೆ ಭಾಷೆಗಳ ಸಂಬಂಧವನ್ನು ನಿರ್ಧರಿಸುವುದನ್ನು ವಿರೋಧಿಸಿ ಭಾಷೆಗಳ ಆಕೃತಿಮಾ ರಚನೆಯ್ನನು ಗಣನೆಗೆ ತೆಗೆದುಕೊಳ್ಳಬೇಕಾದುದರ ಅಗತ್ಯವನ್ನು ಒತ್ತಿ ಹೇಳಿದ. ಆದರೆ ಈ ಅವಧಿಯಲ್ಲಿ ತೌಲನಿಕ ತತ್ತ್ವಗಳನ್ನಾಧರಿಸಿ ಉತ್ತಮ ವ್ಯಾಕರಣವೊಂದನ್ನು ರಚಿಸಿದ ಶ್ರೇಯಸ್ಸು ಫ್ರಾನ್ಸ್ ಬಾಪ್‍ನಿಗೆ ಸಲ್ಲುತ್ತದೆ. ಬಾಪ್, ಧ್ವನಿವ್ಯತ್ಯಾಸಗಳು ಯಾದೃಚ್ಛಿಕವೂ ಆಕಸ್ಮಿಕವೂ ಆಗಿವೆ ಎಂದು ಪರಿಗಣಿಸಿ ಕೇವಲ ಆಕೃತಿಮಾ ರಚನೆಗೆ ಹೆಚ್ಚು ಗಮನ ಕೊಟ್ಟ ಈತನ ಸಂಸ್ಕøತ, eóÉಂಡ್, ಗ್ರೀಕ್, ಲ್ಯಾಟಿನ್, ಗಾತಿಕ್, ಜರ್ಮನ್ ಹಾಗೂ ಲಿತುಯೇನಿಯನ್ ಭಾಷೆಗಳ ತೌಲನಿಕ ವ್ಯಾಕರಣ 1833 ರಲ್ಲಿ ಪ್ರಕಟವಾಯಿತು. ಶಬ್ದ ರಚನೆಗಳನ್ನು ಪೂರ್ಣವಾಗಿ ವಿಶ್ಲೇಷಿಸಿ, ಆಖ್ಯಾತ ಪ್ರತ್ಯಯಗಳನ್ನು ಪ್ರತ್ಯೇಕಿಸಿ ಅವುಗಳ ಪೂರ್ವೇತಿಹಾಸವನ್ನು ಕಂಡುಹಿಡಿಯಲು ಬಾಪ್ ಯತ್ನಿಸಿದ. ಇದಲ್ಲದೇ ಸಂಸ್ಕøತದ ಅಭ್ಯಾಸದಿಂದಲೇ ಇಂಡೋ ಯುರೋಪಿಯನ್ ಭಾಷೆಗಳ ನಿಜವಾದ ಮೂಲವನ್ನು ಅರೆಯಲು ಸಾಧ್ಯವೆಂದು ಹೇಳಿದ.

19ನೆಯ ಶತಮಾನದ ಮತ್ತೊಬ್ಬ ಶ್ರೇಷ್ಠ ಭಾಷಾಶಾಸ್ತ್ರಜ್ಞ ಅಗಸ್ಟ್ ಷ್ಲೈಖರ್ ತತ್ತ್ವಶಾಸ್ತ್ರ, ಹಾಗೂ ನಿಸರ್ಗ ವಿಜ್ಞಾನಗಳಲ್ಲೂ ಪಂಡಿತನಾಗಿದ್ದ. ಈತನ ತತ್ತ್ವಗಳಲ್ಲಿ ಡಾರ್ವಿನ್ನನ ಪ್ರಭಾವ ಎದ್ದು ಕಾಣುತ್ತದೆ. ಈತನ ಇಂಡೋ ಯುರೋಪಿಯನ್ ಭಾಷೆಗಳ ತೌಲನಿಕ ವ್ಯಾಕರಣ 1861 ರಲ್ಲಿ ಪ್ರಕಟವಾಯಿತು. ಸಸ್ಯವಿಜ್ಞಾನಿಯೊಬ್ಬ ಸಸ್ಯಗಳನ್ನು ಅವುಗಳ ಸ್ವರೂಪ ಹಾಗೂ ವೈಶಿಷ್ಟ್ಯಗಳ ಆಧಾರದ ಮೇಲೆ ವಿಗಂಡಿಸುವಂತೆ ಭಾಷೆಗಳನ್ನೂ ವರ್ಗೀಕರಸಬಹುದೆಂಬುದು ಷ್ಲೈಖರನ ಅಭಿಪ್ರಾಯ. ಭಾಷೆಗಳ ವಿಕಾಸಕ್ರಮ ಮತ್ತು ಭಾಷೆಯಲ್ಲಾದ ವ್ಯತ್ಯಾಸಗಳ ಅಧ್ಯಯನಗಳಿಂದ ಭಾಷಿಕ ಪುನರ್ರಚನೆ ಸಾಧ್ಯವೆಂದು ಈತ ಮೊಟ್ಟಮೊದಲು ತಿಳಿಯಪಡಿಸಿದ. ಇದು ಭಾಷಾವಿಜ್ಞಾನಕ್ಕೆ ಷ್ಲೈಖರನ ಮಹತ್ತರ ಕೊಡುಗೆಯಾಗಿದ್ದು ತೌಲನಿಕ ಪದ್ಧತಿ ಎಂಬ ಹೆಸರಿನಲ್ಲಿ ಹೆಚ್ಚು ಪ್ರಸಿದ್ಧವಾಗಿದೆ. ಭಾಷೆಗಳ ವರ್ಗೀಕರಣವನ್ನೂ ಅವುಗಳ ವಿಕಾಸವನ್ನೂ ನಿರ್ದೇಶಿಸುವ ವಂಶವೃಕ್ಷ ಮಾದರಿಯನ್ನೂ ಈತ ನಿರೂಪಿಸಿದ. ಆದರೆ ಇಂಡೋಯುರೋಪಿಯನ್ ಧ್ವನಿಮಾ ವಿಜ್ಞಾನಕ್ಕೆ ಅತ್ಯುತ್ತಮ ಕೊಡುಗೆ ಜೇಕಬ್ ಗ್ರಿಮ್ಮನದಾಗಿದೆ. ಈತನ ಜರ್ಮನ್ ವ್ಯಾಕರಣ 1819 ರಲ್ಲಿ ಪ್ರಕಟವಾಯಿತು. ಇಂಡೋಯುರೋಪಿಯನ್ ಭಾಷೆಗಳಲ್ಲಾದ ಧ್ವನಿವ್ಯತ್ಯಾಸಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ಗ್ರಿಮ್, ಅವು ನಿಯಮಬದ್ದವಾಗಿವೆ ಎಂದು ಅಭಿಪ್ರಾಯಪಟ್ಟ. ಇಂಡೋ-ಯುರೋಪಿಯನ್ ಮಾತೃಭಾಷೆಗೂ ಜಮ್ರ್ಯಾನಿಕ್ ಭಾಷೆಗಳಿಗೂ ಇರುವ ಸಂಬಂಧವನ್ನು ಸೋದಾಹರಣವಾಗಿ ನಿರೂಪಿಸಿ ಸಿದ್ಧಪಡಿಸಿದ. ಇದೇ ಗ್ರಿಮ್ ನಿಯಮ ಎಂದು ಪ್ರಸಿದ್ಧವಾಗಿದೆ. ಓಲ್ಡ್ ಹೈಜರ್ಮನ್ ಭಾಷೆಯ ಭೌಗೋಳಿಕ ವ್ಯತ್ಯಾಸಗಳಿಂದಾಗಿ ಗ್ರಿಮ್ ತನ್ನ ಪ್ರಯತ್ನದಲ್ಲಿ ಹೆಚ್ಚು ಯಶಸ್ಸು ಪಡೆಯಲಾಗಲಿಲ್ಲ. ಆದರೆ ಈತ ಭಾಷೆಯ ವರ್ಣನಾತ್ಮಕ ಅಧ್ಯಯನಕ್ಕೆ ಉತ್ತಮ ಅಡಿಪಾಯವನ್ನು ಹಾಕಿದ. ಆದರೆ ನಿರೂಪಿಸಿದ ನಿಯಮಗಳಿಗೆ ಅನೇಕ ಅಪವಾದಗಳು ತಲೆದೋರಲಾಗಿ ಧ್ವನಿವ್ಯತ್ಯಾಸಗಳನ್ನು ಕಟ್ಟುನಿಟ್ಟಾದ ನಿಯಮಗಳಿಗೆ ಒಳಪಡಿಸಬೇಕೆಂಬ ಯತ್ನದಲ್ಲಿ ಗ್ರಿಮ್ ವಿಫಲನಾದ. 

ಈ ಅಪವಾದಗಳಿಗೆ ಪರಿಹಾರ ಹುಡುಕಿ, ಯಾವುದೇ ಭಾಷೆಯಲ್ಲಾದರೂ ಧ್ವನಿವ್ಯತ್ಯಾಸಗಳು ನಿಯಮಕ್ಕನುಸಾರವಗಿರುತ್ತವೆಂದೂ ಧ್ವನಿನಿಯಮಗಳಿಗೆ ಅಪವಾದಗಳು ಬರಲಾಗದೆಂದೂ ಹೇಳಿದ ವ್ಯಕ್ತಿ ಕಾರ್ಲ್ ವರ್ಜರ್, 1875 ರಲ್ಲಿ ವರ್ನರನ ಲೇಖನ `ಪ್ರಥಮ ವ್ಯಂಜನವ್ಯತ್ಯಯಕ್ಕೊಂದು ಅಪವಾದ ಪ್ರಕಟವಾಯಿತು. ಗ್ರಿಮ್‍ನಿಯಮಕ್ಕೆ ವರ್ನರ್ ಸೂಚಿಸಿದ ತಿದ್ದುಪಡಿ ವರ್ನರ್‍ನ ನಿಯಮವೆಂದು ಪ್ರಸಿದ್ಧವಾಗಿದೆ. ಇದೇ ರೀತಿ ತೌಲನಿಕ ವಿಜ್ಞಾನದಿಂದ ಅನೇಕ ಧ್ವನಿನಿಯಮಗಳು ಹೊರಬಿದ್ದವು. ಇವುಗಳಲ್ಲಿ ಗ್ರಾಸ್‍ಮನ್ ಮತ್ತು ಸಸೂರರ ಇವುಗಳು ಮುಖ್ಯವಾದವು.

ಕಾರ್ಲ್ ವರ್ನರನ್ನನು ಅನುಸರಿಸಿ ಕೆಲವು ತರುಣ ವಿದ್ವಾಂಸರು ಭಾಷೆಗಳನ್ನೂ ಧ್ವನಿ ವ್ಯತ್ಯಯಗಳನ್ನೂ ವೈಜ್ಞಾನಿಕವಾಗಿ ಪರಿಶೀಲಿಸ ಹೊರಟರು. ಧ್ವನಿ ನಿಯಮಗಳಿಗೆ ಅಪವಾದಗಳಿಲ್ಲ - ಎಂಬ ಘೋಷಣೆಯೊಡನೆ ಇವರು ಅಪವಾದಗಳಿಂದೊಡಗೂಡಿದ ಧ್ವನಿನಿಯಮಗಳನ್ನೆಲ್ಲ ಸರಿಪಡಿಸಹೊರಟರು. ಅನೇಕ ಧ್ವನಿವ್ಯತ್ಯಯಗಳಿಗೆ ಆಂತರಿಕ ಸಾದೃಶ್ಯ (ಭಾಷೆಯಲ್ಲಿ ಕಂಡುಬರುವ ಅಸಮಾನ ವಸ್ತುಗಳನ್ನು ಸಮಾನ ವಸ್ತುಗಳನ್ನಾಗಿ ಪರಿವರ್ತಿಸುವ ಪ್ರವೃತ್ತಿ) ಕಾರಣವೆಂದೂ ಹೇಳಿದರು. ಈ ಪೀಳಿಗೆಯ ವಿದ್ವಾಂಸರು ನವವೈಯ್ಯಾಕರಣರೆಂದು ವ್ಯಂಗ್ಯವಾಗಿ ಕರೆಯಲ್ಪಟ್ಟರು. 
                                ವೈಜ್ಞಾನಿಕ ಅಧ್ಯಯನಕ್ಕೆ ಉತ್ತಮ ತಳಹದಿಯನ್ನು ಹಾಕಿಕೊಟ್ಟರೂ ಸಾಮಾಜಿಕ ಸಂಸರ್ಗದಿಂದ ಭಾಷೆಯನ್ನು ಹೊರಗೊಯ್ದು ಈ ಕ್ಷೇತ್ರವನ್ನು ನೀರಸವಾಗಿಸಿದರೆಂಬ ಟೀಕೆಗೂ, ಇವರು ಗುರಿಯಾದರು. ಅನಂತರ ಒಸ್ತಾಫ್ ಮತ್ತು ಕಾರ್ಲ್ ಬ್ರಗ್ಮನ್ ಜರ್ಮನ್ ಭಾಷೆಯಲ್ಲಿ ನಿಯತಕಾಲಿಕಗಳನ್ನು ಆರಂಭಿಸಿ ಭಾಷಾ ವೈಜ್ಞಾನಿಕ ಅಧ್ಯಯನಕ್ಕೆ ಪ್ರೋತ್ಸಾಹ ಕೊಟ್ಟರು. ಆಗಸ್ಟ್ ಫ್ರೀಡ್ರಿಕ್ ಪಾಟ್ ಅಡಾಲ್‍ಬರ್ಟ್ ಕುನ್, ಅಸ್ಕೋಲಿ- ಮೊದಲಾದರು ಈ ಕ್ಷೇತ್ರದ ಬೆಳವಣಿಗೆಗೆ ಕಾರಣರಾದರು. 

ಚಾರಿತ್ರಿಕವಾಗಿ ನೋಡಿದರೆ ಈ ತೌಲನಿಕ ಭಾಷಾವಿಜ್ಞಾನದ ವಿಕಾಸದಲ್ಲಿ ಮೂರು ವಿವಿಧ ಹಂತಗಳು ಕಂಡುಬರುತ್ತವೆ. (1) 19 ನೆಯ ಶತಮಾನದ ಪೂರ್ವ (2) 1800 ರಿಂದ 1870 (3) 1870ರ ಅನಂತರದ ಕಾಲ. ಪ್ರಥಮ ಹಂತದಲ್ಲಿ ಅನೇಕ ಶಬ್ದಕೋಶಗಳ ರಚನೆ, ಅನುವಾದಗಳು ಹಾಗೂ ಭಾಷೆಯ ಐತಿಹಾಸಿಕ ಹಿನ್ನೆಲೆಯ ಸ್ಪಷ್ಟೀಕರಣ ಸಾಧ್ಯವಾಯಿತು. ದ್ವಿತೀಯ ಹಂತದಲ್ಲಿ ತೌಲನಿಕ ವ್ಯಾಕರಣಗಳ ರಚನೆ, ಭಾಷಾವರ್ಗೀಕರಣ, ಭಾಷಿಕ ಪುನರ್ರಚನೆ, ಧ್ವನಿನಿಯಮಗಳ ನಿರೂಪಣೆಯ ಕೆಲಸ ಬಿರುಸಾಗಿ ನಡೆಯಿತು. ತೃತೀಯ ಹಂತದಲ್ಲಿ ಅಪವಾದಗಳಿಗೆ ಸೂಕ್ತಪರಿಹಾರ ನೀಡಿದ್ದು. ವೈಜ್ಞಾನಿಕ ಅಧ್ಯಯನಕ್ಕೆ ತಳಹದಿ ಹಾಕಿದ್ದು ದೇಶ್ಯಭಾಷೆಗಳಿಗೆ ಪ್ರಾಧಾನ್ಯ ಕೊಟ್ಟಿದ್ದು ಮುಖ್ಯ. 

ಭಾಷಾವಿಜ್ಞಾನದ ವಿವಿಧ ಹಂತಗಳ ಬೆಳವಣಿಗೆಯನ್ನು ಗಮನಿಸಿದಾಗ ಈ ವಿಕಾಸಕ್ಕೆ ಕಾರಣೀಭೂತವಾದ ಈ ಕೆಲವು ಅಂಶಗಳು ಕಾಣುತ್ತವೆ. (1) ಕ್ರೈಸ್ತ ಧರ್ಮದ ಪ್ರಚಾರ (2) ಪಾಶ್ಚಾತ್ಯರಿಗಾದ ಸಂಸ್ಕøತದ ಪರಿಚಯ (3) ಸಂಸ್ಕøತ, ಲ್ಯಾಟಿನ್ ಗ್ರೀಕ್ ಮೊದಲಾದ ಶಾಸ್ತ್ರೀಯ ಹಾಗೂ ಸಾಹಿತ್ಯಿಕ ಭಾಷೆಗಳ ಜೊತೆಗೆ ದೇಶಭಾಷೆಗಳ ಆವಿಷ್ಕಾರ (4) ಡಾರ್ವಿನ್ನನ ವಿಕಾಸವಾದದ ಪ್ರಭಾವ (5) ಭೌಗೋಳಿಕ ಕ್ಷೇತ್ರದ ಪ್ರಗತಿ (6) ಮುದ್ರಣದ ಆವಿಷ್ಕಾರ.

18 ಹಾಗೂ 19 ನೆಯ ಶತಮಾನದಲ್ಲಿ ಕ್ರೈಸ್ತಧರ್ಮದ ಪ್ರಚಾರ ಭರದಿಂದ ಸಾಗಿತ್ತು. ಪಾದ್ರಿಗಳು ಜಗತ್ತಿನ ವಿವಿಧ ಭಾಗಗಳಿಗೆ ಕಳುಹಿಸಲ್ಪಟರು. ಧರ್ಮಪ್ರಚಾರಕ್ಕಾಗಿ ಇವರು ಸ್ಥಳೀಯ ಭಾಷೆಗಳನ್ನು ಕಲಿಯಬೇಕಾಯಿತು. ಬೈಬಲ್ ಗ್ರಂಥದ ಅನುವಾದಕಾರ್ಯವೂ ತುರ್ತೆನಿಸಿತು. ಅನೇಕ ಭಾಷೆಗಳ ಪರಿಚಯವೇ ಅಲ್ಲದೇ ಅನುವಾದ ಮುಖೇನ ಭಾಷಾವೈಶಿಷ್ಟ್ಯಗಳ ಅರಿವೂ ಉಂಟಾಯಿತು. ಧರ್ಮಪ್ರಚಾರಕರು ಹೊಸ ಹೊಸ ಭಾಷೆಗಳನ್ನು ಕಲಿತು ತೌಲನಿಕ ಆಧ್ಯಯನಕ್ಕೆ ಉತ್ತೇಜನ ಕೊಟ್ಟರು. ಕೇವಲ ಯುರೋಪಿನಲ್ಲೇ ಅಲ್ಲದೆ ಜಗತ್ತಿನ ಇತರೆಡೆಗಳಲ್ಲೂ ಈ ಕೆಲಸ ಸಾಗಿತು. ಭಾರತವೇ ಮೊದಲಾದ ಪರಾಧೀನವಾಗಿದ್ದ ರಾಷ್ಟ್ರಗಳಿಗೆ ಸರ್ಕಾರಿ ಕಾರ್ಯನಿಮಿತ್ತ ಬಂದ ಪಾಶ್ಚಾತ್ಯರೂ ಭಾಷಾ ಅಧ್ಯಯನದಲ್ಲಿಯೇ ಆಸ್ಥೆ ವಹಿಸಿ ಬಂದವರೂ ಸ್ಥಳೀಯ ಭಾಷೆಗಳನ್ನು ಕಲಿಯತೊಡಗಿದರು. ದ್ರಾವಿಡ ಭಾಷೆಗಳ ಬಗ್ಗೆ ನಡೆದಿರುವ ಅಧ್ಯಯನವನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ ರಾಬರ್ಟ್ ಕಾಲ್ಡ್‍ವೆಲ್, ಗುಂಡರ್ಟ್, ಬ್ರಿಗೆಲ್, ಬರೊ, ಕಿಟ್ಟೆಲ್, ಬೀಮ್ಸ್, ಎಮಿನೊ, ರೈಸ್ ಮುಂತಾದ ವಿದ್ವಾಂಸರ ಹೆಸರುಗಳು ಚಿರಪರಿಚಿತವಾಗಿವೆ. ತೌಲನಿಕ ಸಿದ್ದಾಂತಗಳ ಆಧಾರದ ಮೇಲೆ 1856 ರಲ್ಲಿ ಕಾಲ್ಡ್‍ವೆಲ್ ರಚಿಸಿದ ದ್ರಾವಿಡ ಭಾಷೆಗಳ ತುಲನಾತ್ಮಕ ವ್ಯಾಕರಣ ಇಂದಿಗೂ ಈ ಕ್ಷೇತ್ರದಲ್ಲಿ ಉದ್ಗ್ರಂಥವಾಗಿದೆ.

ರಾಸ್ಕನ ವರೆಗೂ ನಡೆದ ಕಾರ್ಯದಲ್ಲಿ ಸಂಸ್ಕøತದ ಹೆಸರಿಲ್ಲದೇ ಕೇವಲ ಯೂರೋಪಿನ ಭಾಷೆಗಳ ಅಧ್ಯಯನ ನೀರಸವಾಗಿತ್ತು. ಸರ್ ವಿಲಿಯಂ ಜೋನ್ಸನ ಮಹದುಪಕಾರದಿಂದ ಪಾಶ್ಚಾತ್ಯರಿಗೆ ಸಂಸ್ಕøತ ಭಾಷೆಯ ನಿಜವಾದ ಸ್ವರೂಪ, ತೌಲನಿಕ ಅಧ್ಯಯನದಲ್ಲಿ ಅದರ ಪಾತ್ರ - ಇವುಗಳ ಅರಿವಾಯಿತು. ಅನೇಕರು ತೌಲನಿಕ ಅಧ್ಯಯನಗಳನ್ನು ನಡೆಸಿ ಸಂಸ್ಕøತವೇ ಆದಿಭಾಷೆಯೆಂಬ ನಿರ್ಧಾರಕ್ಕೆ ಬಂದರು. (ಆದರೆ ಈ ವಿಷಯದಲ್ಲಿ ಮತಭೇದವಿದೆ). ಸಂಸ್ಕøತದ ಪರಿಚಯವಾದ ಮೇಲೆ ಇಂಡೋ-ಯುರೋಪಿಯನ್ ತೌಲನಿಕ ಭಾಷಾವಿಜ್ಞಾನದಲ್ಲಿ ಹೊಸ ತಿರುವೇ ಉಂಟಾಯಿತು. ಸತಸ್ಕøತದ ಶ್ರೇಷ್ಠ ಸ್ಥಾನವನ್ನರಿತ ಪಾಶ್ಚಾತ್ಯರಲ್ಲನೇಕರು ಅದರ ವಿಜ್ಞಾನವಿಲ್ಲದೇ ತೌಲನಿಕ ಅಧ್ಯಯನ ಅಸಾಧ್ಯವೆಂದು ಅಭಿಪ್ರಾಯಪಟ್ಟರು.

18 ಹಾಗೂ 19ನೆಯ ಶತಮಾನದಲ್ಲಿ ಲ್ಯಾಟಿನ್ ಹಾಗೂ ಗ್ರೀಕ್ ಭಾಷೆಗಳನ್ನೂ ಶಾಸ್ತ್ರೀಯ ಭಾಷೆಗಳೆಂದು ಪರಿಗಣಿಸಲಾಗಿತ್ತು. ಸಾಹಿತ್ಯಕ್ಕೆ ಸಂಬಂಧಪಟ್ಟ ಗ್ರಂಥವಾಗಲಿ ಭಾಷೆಗೆ ಸಂಬಂಧಪಟ್ಟ ಗ್ರಂಥವಾಗಲಿ ಈ ಭಾಷೆಗಳಲ್ಲಿಯೇ ಇರಬೇಕಾಗಿತ್ತು. ಇದರ ಪರಿಣಾಮವಾಗಿ ಅನೇಕ ದೇಶೀಯ ಭಾಷೆ, ಉಪಭಾಷೆಗಳು ವಿದ್ವಾಂಸರ ದೃಷ್ಟಿಯಿಂದ ದೂರವಾಗಿದ್ದವು. ಲೈಬ್‍ನಿಟ್ಜ್, ಷ್ಲೈಖರ್ ಮುಂತಾದವರ ಪ್ರಯತ್ನದಿಂದ ಅನೇಕ ಭಾಷೆಗಳು ಪ್ರಾಮುಖ್ಯಕ್ಕೆ ಬಂದವು. ಆ ಭಾಷೆಗಳಲ್ಲಿ ಸಾಹಿತ್ಯರಚನೆಯೂ ನಡೆದು ತೌಲನಿಕ ಅಧ್ಯಯನಕ್ಕೆ ಪುಷ್ಠಿ ದೊರೆಯಿತು. 18ನೆಯ ಶತಮಾನದಲ್ಲಿ ಕ್ರಾಂತಿಯೆಬ್ಬಿಸಿದ ಮತ್ತೊಂದು ಆಂಶ ಡಾರ್ವಿನ್ನನ ವಿಕಾಸವಾದ. ಭಾಷೆಯನ್ನು ಒಂದು ನೈಸರ್ಗಿಕ ಜೀವಿ ಎಂದು ಪರಿಗಣಿಸಿ ಅದರ ಸ್ವಚ್ಛಂದ ಅಧ್ಯಯನ ಸಾಧ್ಯವೆಂದು ವಿದ್ವಾಂಸರು ಅಭಿಪ್ರಯಪಟ್ಟರು. ಭೌಗೋಳಿಕ ಅಧ್ಯಯನದಿಂದ ಹೊಸ ಹೊಸಭಾಷೆಗಳು ಬೆಳಕಿಗೆ ಬಂದವು. ಇದರಿಂದ ಭಾಷೆಯ ರಚನೆಯ ಬಗ್ಗೆ ಅಧ್ಯಯನ ನಡೆಸಬೇಕೆಂಬ ಕುತೂಹಲವೂ ಹೆಚ್ಚಿತು. ಮುದ್ರಣದ ಆವಿಷ್ಕಾರದಿಂದ ಬೈಬಲ್ ಮುಂತಾದ ಧಾರ್ಮಿಕ ಗ್ರಂಥಗಳ ಅನುವಾದವನ್ನೂ ಶ್ರೇಷ್ಠಮಟ್ಟದ ಸಾಹಿತ್ಯಿಕ ರಚನೆಗಳನ್ನೂ ನಶಿಸಿಹೋಗದಂತಿಡಲು ಅವಕಾಶವಾಯಿತು. ಕೇವಲ ಗ್ರಂಥಸ್ಥ ಭಾಷೆಗಳಿಗಷ್ಟೇ ಸೀಮಿತವಾಗಿದ್ದ ಅಧ್ಯಯನ ತೌಲನಿಕ ಭಾಷಾಶಾಸ್ತ್ರ ಎಂದು ಪ್ರಾಚುರ್ಯಕ್ಕೆ ಬಂದಿತು.

ತೌಲನಿಕ ಪದ್ಧತಿ ಮತ್ತು ಭಾಷಿಕ ಪುನರ್ರಚನೆ : ಯಾವುದೇ ಎರಡು ಅಥವಾ ಹೆಚ್ಚು ಭಾಷೆಗಳನ್ನು ತುಲನೆ ಮಾಡಿ ಅವುಗಳ ಅನುವಂಶಿಕ ಸಂಬಂಧಗಳನ್ನೂ ಭಾಷಿಕ ವ್ಯತ್ಯಾಸಗಳನ್ನೂ ಗುರುತಿಸಿದ ಪದ್ಧತಿಗೆ ತೌಲನಿಕ ಪದ್ಧತಿಯೆಂದು ಹೆಸರು. ಈ ಪದ್ಧತಿಯಿಂದ ಭಾಷೆಗಳನ್ನು ವಿವಿಧ ವರ್ಗಗಳನ್ನಾಗಿ ವಿಭಾಗಿಸುವುದು ಸಾಧ್ಯ. ಭಾಷೆಗಳನ್ನು ಹೋಲಿಸಿ, ಭಾಷಿಕ ವ್ಯತ್ಯಾಸಗಳನ್ನು ಗುರುತಿಸಿ ಒಂದು ಭಾಷೆ ಹಿಂದಿನ ವ್ಯವಸ್ಥೆಯನ್ನೋ ಭಾಷಾವರ್ಗದ ಮೂಲ ಭಾಷೆಯನ್ನೋ ಕಂಡುಹಿಡಿಯುವ ವಿಧಾನಕ್ಕೆ ಭಾಷಿಕ ಪುನರ್ರಚನೆ ಎಂದು ಹೆಸರು. ಭಾಷಿಕ ಪುನರ್ರಚನೆಯಲ್ಲಿ ಎರಡು ಬಗೆ - ಬಾಹ್ಯ ಮತ್ತು ಅಂತರಿಕ ಎಂದು. ಅನೇಕ ಭಾಷೆಗಳ ನಡುವೆ ಇರಬಹುದಾದ ಆನುವಂಶಿಕ ಸಂಬಂಧವನ್ನು ಸ್ಪಷ್ಟಪಡಿಸುವುದು ಬಾಹ್ಯ ಪುನರ್ರಚನೆಯ ಉದ್ದೇಶ. ಒಂದೇ ಭಾಷೆಯ ಉಪಭಾಷೆಗಳ ನಡುವೆ ಅನುವಂಶಿಕ ಸಂಬಂಧವನ್ನು ಸ್ಪಷ್ಟಪಡಿಸಿ ಆ ಭಾಷೆಯ ಹಿಂದಿನ ಸ್ಥಿತಿಯನ್ನು ಗುರುತಿಸುವುದು ಆಂತರಿಕ ಪುನರ್ರಚನೆಯ ಉದ್ದೇಶ.

ಭಾಷೆಗಳು ತೌಲನಿಕ ಅಧ್ಯಯನ ಧ್ವನಿಮಾ, ಆಕೃತಿಮಾ, ಹಾಗೂ ಶಬ್ದಗಳ ಸ್ತರಗಳಲ್ಲಿ ನಡೆಯುತ್ತವೆ. ಇವೆಲ್ಲಕ್ಕೂ ಆಧಾರ ಭಾಷೆಗಳಲ್ಲಿ ಬಳಕೆಯಲ್ಲಿರುವ ಜ್ಞಾತಿಶಬ್ದಗಳು. ಇವು ಅನುವಂಶಿಕ ಸಂಬಂಧವನ್ನು ಹೊಂದಿರುವ ಭಾಷೆಗಳ ಸ್ವತ್ತಾಗಿದ್ದು ಧ್ವನಿ ಹಾಗೂ ಅರ್ಥಗಳೆರಡರಲ್ಲೂ ಒಂದನ್ನೊಂದು ಹೋಲುತ್ತವೆ. ಬಾಹ್ಯ ಪುನರ್ರಚನೆಗಾಗಲಿ ಆಂತರಿಕ ಪುನರ್ರಚನೆಗಾಗಲಿ ಜ್ಞಾತಿಶಬ್ದಗಳ ಸಂಗ್ರಹಣೆ ಅತ್ಯಗತ್ಯ.

ಬಾಹ್ಯ ಪುನರ್ರಚನೆ : ಭಾಷಾ ಪೂರ್ವೇತಿಹಾಸವನ್ನು ತಿಳಿಯಲು ಬಳಸುವ ತಂತ್ರಗಳಲ್ಲಿ ಬಾಹ್ಯ ಪುನರ್ರಚನೆ ಮುಖ್ಯವಾದುದ್ದು. ಲಿಖಿತ ಆದಾರಗಳಿಲ್ಲದಿದ್ದಲ್ಲಿ ಈ ತಂತ್ರಗಳನ್ನು ಬಳಸಿ ಭಾಷೆಯ ಪೂರ್ವಸ್ಥಿತಿಯನ್ನು ಅರಿಯಬಹುದು. ಭಾಷೆಗಳು ಒಂದನ್ನೊಂದನ್ನು ಹೋಲುವಲ್ಲಿ ಅಥವಾ ಹೋಲುವಂತೆ ಕಂಡುಬಂದಲ್ಲಿ ಅವುಗಳ ಸಂಬಂಧಗಳನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗುತ್ತದೆ. ವಿವಿಧ ಭಾಷೆಗಳಿಂದ ಸಂಗ್ರಹಿಸಿದ ಜ್ಞಾತಿಶಬ್ದಗಳ ಹೋಲಿಕೆಯಿಂದ ತೌಲನಿಕ ಅಧ್ಯಯನ ಪ್ರಾರಂಭವಾಗುತ್ತದೆ. ಒಂದೇ ಮೂಲದಿಂದ ಹುಟ್ಟಿದ್ದರೂ ಈ ಶಬ್ದಗಳಲ್ಲಿ ಬದಲಾವಣೆ ಉಂಟಾಗಿರುತ್ತದೆ. ಈ ವ್ಯತ್ಯಾಸಗಳನ್ನು ಆಧರಿಸಿ ಯಾವ ಭಾಷಿಕ ಅಂಶ ಅತಿ ಹೆಚ್ಚು ಭಾಷೆಗಳಲ್ಲಿ ಕಂಡುಬರುತ್ತದೋ ಅದನ್ನು ಪೂರ್ವರೂಪವೆಂದು ಪರಿಗಣಿಸಲಾಗುತ್ತದೆ. ಇಲ್ಲಿ ಎರಡು ಮುಖ್ಯ ನಿಯಮಗಳನ್ನು ಅನುಸರಿಸಬೇಕಾಗುತ್ತದೆ. (1) ಭಾಷಿಕ ವ್ಯತ್ಯಾಸಗಳು ಕ್ರಮಬದ್ಧವಾಗಿರಬೇಕು. (2) ಒಂದೆಡೆ ಕಂಡುಬಂದ ವ್ಯತ್ಯಾಸ ಪುನರಾವರ್ತಿತವಾಗಬೇಕು. ವ್ಯತ್ಯಾಸಗಳು ಕ್ರಮಬದ್ಧವಾಗಿರಬೇಕೆಂದರೆ ಹೋಲಿಸಿ ನೋಡುವ ಭಾಷೆಗಳಲ್ಲಿ ಒಂದು ನಿರ್ದಿಷ್ಟ ಜ್ಞಾತಿಶಬ್ದರೂಪದಲ್ಲಿ ಅತಿ ಹೆಚ್ಚಿನ ಭಿನ್ನತೆ ಕಂಡುಬರಲಾಗದು. ಉದಾಹರಣೆಗೆ ಕಣ್ಣು ಎಂಬ ಶಬ್ದಕ್ಕೆ ತಮಿಳು, ಮಲೆಯಾಳಂ ಭಾಷೆಗಳಲ್ಲಿ ಕಣ್, ತೋಡದಲ್ಲಿ ಕೊಣ್, ತೆಲುಗಿನಲ್ಲಿ ಕನ್ನು, ತುಳು ಕಣ್ಣು, ಕೊಲಾಮಿ, ನಾಯ್ಕಿಪರ್ಜಿ, ಗೋಂಡಿ, ಮಂದ ಭಾಷೆಗಳಲ್ಲಿ ಕನ್, ಪೆಂಗು ಭಾಷೆಯಲ್ಲಿ ಕಂಗ, ಮಾಲ್ತೊವಿನಲ್ಲಿ ಖನ, ಕುರುಖ್ ಮತ್ತು ಬ್ರಾಹುಯಿಯಲ್ಲಿ ಖನ ಎಂಬ ರೂಪಗಳು ಬಳಕೆಯಲ್ಲಿವೆ. ಇಲ್ಲಿ ಕ, ಣ, ಅ. - ಈ ಎಲ್ಲ ಧ್ವನಿಗಳಲ್ಲೂ ವ್ಯತ್ಯಾಸವೇನೂ ಅಷ್ಟಾಗಿ ಕಂಡುಬರುವುದಿಲ್ಲ. ಹೀಗೆ ವ್ಯತ್ಯಾಸ ಅಲ್ಪವಾಗಿದ್ದರೆ, ಧ್ವನಿ ವ್ಯತ್ಯಾಸ ಕ್ರಮಬದ್ಧವಾಗಿದೆಯೆಂದರ್ಥ. ಭಿನ್ನತೆ ಹೆಚ್ಚಿದಲ್ಲಿ ಪುನರ್ರಚನೆ ಕ್ಲಿಷ್ಟವಾಗುತ್ತದೆಯಲ್ಲದೆ ಹೆಚ್ಚಿನ ಮಾಹಿತಿಗಳನ್ನು ಸಂಗ್ರಹಿಸಬೇಕಾಗುತ್ತದೆ. ಮೇಲಿನ ಉದಾಹರಣೆಯಿಂದ ಕಣ್ ಎಂಬ ರೂಪವನ್ನು ಪುನರ್ರಚಿತ ರೂಪವೆಂದು ಹೇಳುತ್ತೇವೆ. ಪುನರ್ರಚಿತ ರೂಪವನ್ನು ಕಣ್ ಎಂದು ಸೂಚಿಸುತ್ತೇವೆ. ಎರಡನೆಯ ನಿಯಮದಂತೆ ಕಣ್ ಎಂಬಲ್ಲಿ ಕಂಡುಬಂದ ಕ ಧ್ವನಿಯ ವ್ಯತ್ಯಾಸವಾಗಲಿ, ಣ ಧ್ವನಿಯ ವ್ಯತ್ಯಾಸವಾಗಲಿ, ಇನ್ನಿತರ ಜ್ಞಾತಿಶಬ್ದಗಳಲ್ಲೂ ಕಂಡುಬರಬೇಕು. ಅಂದಾಗಲೇ ಕ ಅಥವಾ ಣ ಧ್ವನಿಯ ಪುನರ್ರಚನೆ ಸಾಧ್ಯ. ಹೀಗೆ ಧ್ವನಿಮಾ ಆಕೃತಿಮಾ ಹಾಗೂ ಸಂಧಿ ಪಕ್ರಿಯೆಗಳನ್ನೂ ಪುನರ್ರರಚಿಸಬಹುದು. ಆದರೆ ಈ ಪದ್ದತಿ ಖಚಿತವಾದ ಫಲಿತಾಂಶವನ್ನು ನೀಡುತ್ತದೆಂಬುದು ಅನುಮಾನಾಸ್ಪದವಾಗಿದೆ. ಏಕೆಂದರೆ ಈ ತಂತ್ರದ ಪ್ರಾತಂಭಿಕ ಊಹೆ ತಪ್ಪಾಗಿ ಕಂಡುಬರುತ್ತದೆ. ಇದನ್ನು ಬಳಸುವುದರಿಂದ ಮೂಲಭಾಷೆಯನ್ನೇನೋ ಗುರುತಿಸಬಹುದು ಆದರೆ ಯಾವ ಭಾಷೆಯೂ ಪ್ರಾದೇಶಿಕ ಹಾಗೂ ಸಾಮಾಜಿಕ ಭಿನ್ನತೆಗಳಿಲ್ಲದೆ ಇರುವುದಿಲ್ಲ. ನಾವು ಭಾಷೆಯನ್ನು ಪುನರ್ರಚಿಸುವಾಗ ಈ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಎರಡನೆಯದಾಗಿ ಶಬ್ದಗಳ  ಜ್ಞಾತಿತ್ವವನ್ನು ನಿರ್ಧರಿಸುವಲ್ಲಿ ತೊಡಕು ಕಂಡುಬರುತ್ತದೆ. ಅನೇಕ ವೇಳೆ ಆಕಸ್ಮಿಕ ಹೋಲಿಕೆಯುಳ್ಳ ಅಥವಾ ಸ್ವೀಕೃತ ಶಬ್ದಗಳನ್ನು ಭಾಷೆಯ ಸ್ವತ್ತಾಗಿ ತಿಳಿಯಲಾರದ ಸಾಧ್ಯತೆ ಇದೆ. ಆದುದರಿಂದ ತೌಲನಿಕ ಪದ್ಧತಿ ಕೇವಲ ಸ್ವತಂತ್ರ್ಯ ಭಾಷೆಗಳಿಗಷ್ಟೇ ಸಾಧ್ಯ: ಒಂದೇ ಭಾಷೆಯ ಉಪಭಾಷೆಗಳಿಗಲ್ಲ. 

ಆಂತರಿಕ ಪುನರ್ರಚನೆ : ಆಂತರಿಕ ಪುನರ್ರಚನೆ ಭಾಷಾಪೂರ್ವೇತಿಹಾಸವನ್ನು ಅರಿಯಲು ಬಳಸುವ ತಂತ್ರಗಳಲ್ಲೊಂದು. ಒಂದೇ ಭಾಷೆಯ ವಿಕಾಸಕೆಕ ಸಂಬಂಧಪಟ್ಟಂತೆ ಒಂದು ನಿರ್ದಿಷ್ಟ ಕಾಲಕ್ಕೆ ಮಾತ್ರ ಈ ತಂತ್ರ ಹೊಂದುತ್ತದೆ. ಭಾಷೆಯ ವಿಕಾಸಕ್ರಮದಲ್ಲಿ ಉಂಟಾಗುವ ಬದಲಾವಣೆಗಳು ಸ್ಪಷ್ಟ ಕುರುಹನ್ನು ಉಳಿಸುತ್ತವೆ. ಇವುಗಳಿಂದ ಭಾಷೆಯಲ್ಲುಂಟಾದ ವ್ಯತ್ಯಾಸಗಳನ್ನು ಅರಿಯಲು ಸಾಧ್ಯವಿದೆ. ಇದಕ್ಕೂ ಆಡುನುಡಿಯ ಮಾಹಿತಿ ಅತ್ಯಗತ್ಯ. ಭಾಷೆಯ ಪೂರ್ವಸ್ಥಿತಿಗೆ ಲಿಖಿತ ಆಧಾರಗಳಿಲ್ಲದಲ್ಲಿ ಈ ತಂತ್ರವನ್ನು ಬಳಸಬಹುದಾಗಿದೆ. ಧ್ವನಿವ್ಯತ್ಯಾಸ ಭಾಷೆಯ ಸಂಧಿಪ್ರಕ್ರಿಯೆಗಳಲ್ಲಿಯೂ ಬದಲಾವಣೆಯನ್ನುಂಟುಮಾಡುತ್ತದೆ. ಹೀಗಾಗಿ ಸಧಿಪ್ರಕ್ರಿಯೆಗಳು ಧ್ವನಿವ್ಯತ್ಯಾಸಗಳಿಗೆ ಉತ್ತಮ ಸುಳಿವನ್ನು ಒದಗಿಸುತ್ತವೆ. ಭಾಷೆಯ ಪ್ರಾಗಿತಿಹಾಸವನ್ನು ಅರಿಯಲು ಕೇವಲ ಆ ಭಾಷೆಯ ಆಧಾರಗಳನ್ನೇ ಬಳಸುವುದದರಿಂದ ಈ ತಂತ್ರಕ್ಕೆ ಅಂತರಿಕ ಪುನರ್ರಚನೆ ಎಂದು ಹೆಸರು. ಮತ್ತೆ ಕೆಲವು ವಿಶಿಷ್ಟ ಸಂದರ್ಭಗಳಲ್ಲಿ ವಿರೋಧ (ಇನ್‍ವರ್‍ಟೆಡ್) ಪುನರ್ರಚನೆ ಎಂಬ ತಂತ್ರವನ್ನೂ ಬಳಸುವುದುಂಟು.

ಅನೇಕ ನ್ಯೂನ್ಯತೆಗಳಿಂದ ಕೂಡಿದ್ದರೂ ತೌಲನಿಕ ಪದ್ಧತಿ ಉತ್ತಮ ಯಶಸ್ಸನ್ನೊದಗಿಸಿಕೊಟ್ಟಿದೆ. ಈ ಪದ್ಧತಿ ಒಂದೆಡೆ ಚಾರಿತ್ರಿಕ ಭಾಷಾವಿಜ್ಞಾನನಕ್ಕೂ ಮತ್ತೊಂದೆಡೆ ವೈದ್ಯಶ್ಶಿಕ ಭಾಷಾವಿಜ್ಞಾನಕ್ಕೂ ಮೂಲವಾಗಿದೆ. ಎರಡು ಭಾಷೆಗಳ ಧ್ವನಿ, ಶಬ್ದ ಮತ್ತು ಆಕೃತಿಮಾಗಳ ಸಮಾನತೆಯನ್ನು ಗಣನೆಗೆ ತೆಗೆದುಕೊಂಡಾಗ ಅವು ಒಂದೇ ವರ್ಗಕ್ಕೆ ಸೇರುತ್ತವೆಂದು ಹೇಳಲು ಅವಕಾಶವಿದೆ. ಅದೇ ಭಾಷೆಗಳ ಧ್ವನಿ ಆಕೃತಿಮಾ ಹಾಗೂ ಶಬ್ದಗಳ ಅಸಮಾನತೆಯನ್ನು ಗಣನೆಗೆ ತೆಗೆದುಕೊಂಡಾಗ ವೈದೃಶ್ಯಿಕ ಅಂಶಗಳು ಬೆಳಕಿಗೆ ಬರುತ್ತವೆ. 19 ನೆಯ ಶತಮಾನದಲ್ಲಿ ಭಾಷೆಯ ಐತಿಹಾಸಿಕ ಅಧ್ಯಯನಕ್ಕೆ ಬೇಕದ ತತ್ತ್ವಗಳು ನಿರೂಪಿತಗೊಂಡಿದ್ದರಿಂದ ಈ ಕಾಲವನ್ನು ಚಾರಿತ್ರಿಕ ತೌಲನಿಕ ಭಾಷಾವಿಜ್ಞಾನದ ಕಾಲವೆಂದು ಕರೆಯುವುದು ವಾಡಿಕೆ. ಇದರ ನಂತರ ವಿಲ್‍ಹೆಲ್ಡ್ ಹಮಬೋಲ್ಟ್ ಎಸ್ವರ್ಸನ್, ಫರ್ಡಿನೆಂಡ್ ಡಿ ಸಸೂರ್ ಮೊದಲಾದವರ ಪ್ರಯತ್ನದಿಂದ ಭಾಷೆಯ ವೈಜ್ಞಾನಿಕ  ಅಧ್ಯಯನ ಹಾಗೂ ವರ್ಣನಾತ್ಮಕ ಭಾಷಾವಿಜ್ಞಾನ ಶಾಖೆಯ ಸ್ಥಾಪನೆ ಸಾಧ್ಯವಾಯಿತು.
(ಎಸ್.ಎಸ್.ವೈ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ